ಪುಟಗಳು

ಮಂಗಳವಾರ, ಮಾರ್ಚ್ 3, 2015

ಮದ್ದೂರು ವಡೆ

ಸಾಮಾನು:
  • ಅರ್ಧ ಸೇರು ಕಡಲೆಬೇಳೆ
  • ಒಂದು ತೆಂಗಿನಕಾಯಿ
  • 12 ಈರುಳ್ಳಿ
  • ಒಂದು ಹಿಡಿ ಎಳ್ಳು
  • ಎರಡು ಟೇಬಲ್ ಚಮಚ ಉಪ್ಪು
  • ಹನ್ನೆರಡು ಹಸಿಮೆಣಸಿನಕಾಯಿ
  • ಕಾಲು ಚಮಚ ಸೋಡಾಪುಡಿ
  • 50 ಗ್ರಾಂ ಚಿರೋಟಿ ರವೆ
  • ಕರಿಯಲು ಒಂದು ಕೆಜಿ ಕಡಲೆಕಾಯಿ ಎಣ್ಣೆ
ಮಾಡುವ ವಿಧಾನ:
ಕಡಲೆಬೇಳೆಯನ್ನು ಒಂದು ಗಂಟೆಯ ಕಾಲ ನೀರಿನಲ್ಲಿ ನೆನೆಹಾಕಿ ಚೆನ್ನಾಗಿ ತೊಳೆದು, ಒರಳಿನಲ್ಲಿ ರುಬ್ಬಿ ಒಂದು ಪಾತ್ರಗೆ ಹಾಕಿಕೊಳ್ಳಬೇಕು. ರುಬ್ಬಿದ ಕಡಲೆಬೇಳೆಗೆ ತೆಂಗಿನಕಾಯಿ ತುರಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು, ಸೋಡಾಪುಡಿ, ಎಳ್ಳು, ಚಿರೋಟಿ ರವೆ, ಎರಡು ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಅಂಗೈ ಅಗಲ ವಡೆಗಳನ್ನು ಎಲೆಯ ಮೇಲೆ ತಟ್ಟಿ ಎಣ್ಣೆಗೆ ಹಾಕಿ ಕೆಂಪಗೆ ಕರಿದರೆ ಬಿಸಿಬಿಸಿಯಾದ ಮದ್ದೂರು ವಡೆ ತಯಾರಾಗುತ್ತದೆ.
 ಕೃಪೆ: ಕನ್ನಡಪ್ರಭ
-ಮಂಜುಳ.ವಿ.ಎನ್

ಕಡಲೆಪುರಿ ಬಾತ್

ಸಾಮಾಗ್ರಿಗಳು:
  • (ಬೆಂಗಳೂರು) ಕಡಲೆಪುರಿ-5 ಲೀಟರ್
  • ಹುರಿಗಡಲೆ-50 ಗ್ರಾಂ
  • ಖಾರದ ಪುಡಿ-2 ಚಮಚ
  • ಉಪ್ಪು- 1.1/2 ಚಮಚ
  • ಕರಿಬೇವು-2 ಕಡ್ಡಿ
  • ಸಾಸಿವೆ- 1/2 ಚಮಚ
  • ಈರುಳ್ಳಿ -4
  • ಬೆಳ್ಳುಳ್ಳಿ - 10 ಎಸಳು
  • ಕೊತ್ತಂಬರಿ ಸೊಪ್ಪು-4 ಕಡ್ಡಿ
  • ಟೊಮ್ಯಾಟೋ-3
  • ಎಣ್ಣೆ- 30-35 ಚಮಚ
 ಮಾಡುವ ವಿಧಾನ:
ಹುರಿಗಡಲೆ, ಬೆಳ್ಳುಳ್ಳಿ, ಖಾರದಪುಡಿ, ಉಪ್ಪು1/2 ಚಮಚ ಎಲ್ಲವನ್ನು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಸ್ವಚ್ಛಗೊಳಿಸಿದ ಕಡಲೆಪುರಿಯನ್ನು ನೀರಿನಲ್ಲಿ ನೆನೆಸಿ, ನೀರು ಇಲ್ಲದಂತೆ ಹಿಂಡಿ ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ, ಕರಿಬೇವು ಹಾಕಬೇಕು ಕೆಂಪಗಾಗುತ್ತಿದ್ದಂತೆಯೇ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೂ ಬಿಡಬೇಕು. ಟೊಮ್ಯಾಟೋ ಹಾಕಿ ಬೆಂದ ನಂತರ ಮೊದಲೇ ಮಾಡಿಟ್ಟುಕೊಂಡಿದ್ದ ಹುರಿಗಡಲೆ ಪುಡಿ ಹಾಗೂ ಉಪ್ಪನ್ನು ಹಾಕಿ 2 ನಿಮಿಷ ಕೈಯಾಡಿಸಬೇಕು. ಇದಾದ ಮೇಲೆ ನೆನೆಸಿಟ್ಟುಕೊಂಡಿದ್ದ ಕಡಲೆಪುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದೆರಡು ನಿಮಿಷ ಒಲೆಯ ಮೇಲೆ ಬಿಸಿಯಾಗಲು ಬಿಟ್ಟರೆ ಕಡಲೆಪುರಿ ಬಾತ್ ತಿನ್ನಲು ಸಿದ್ಧವಾಗುತ್ತದೆ.
ಕೃಪೆ: ಕನ್ನಡಪ್ರಭ
-ಮಂಜುಳ.ವಿ.ಎನ್